google335ba9a120c43584.html "ಮಿಣ್ಪುಳಿ" - ಅರೆಭಾಷೆ ಬರಹಗಳ ಜೊಂಗೆ...(Blog on Arebhashe Articles of Gowdas ): ಹೀಂಗೊಬ್ಬ "ಭಾಷೆಇಲ್ಲದಂವ"!!!

https://arebhasheminpuli.blogspot.com/2017/08/blog-post_11.html

Tuesday 1 August 2017

ಹೀಂಗೊಬ್ಬ "ಭಾಷೆಇಲ್ಲದಂವ"!!!


              ಒಬ್ಬಂಗೆ ಎಷ್ಟ್ ಹೇಳ್ರೂ ಅರ್ಥ ಆಗದಿದ್ದರೆ, ಅರ್ಥ ಮಾಡಿಕಣದಿದ್ದದೆ... ಕೆಪ್ಪನಾಂಗೆ ಮಾಡಿಕಂಡಿದ್ದರೆ ನಾವ್ ಅವಂಗೆ ಹೇಳುವ ಸರ್ವೇಸಾಮಾನ್ಯ ಮಾತ್ "ಅವಂಗೆ ಭಾಷೆ ಇಲ್ಲೆಯಾ!!". ಮೊನ್ಸ ಆಗಿ ಹುಟ್ಟಿದವಂಗೆ ಭಾಷೆ ತೇಂಳ್ದು ಅತೀ ಅಗತ್ಯ. ಅದ್ ಒಳ್ದವರೊಟ್ಟಿಗೆ ಮಾತಾಡಿಕೆ ಆಗಿರ್ದು. ಅವಃನ ಭಾವನೆಗಳ ಅರ್ಥ ಮಾಡಿಕಂಬಕೂ ಆಗಿರ್ದು. ಶುದ್ಧಕನ್ನಡಲಿ ಹೇಳ್ದಾದರೆ "ಸಂವಹನ ಮಾಧ್ಯಮ". ಎಲ್ಲವ್ಕೂ ಇನ್ನೊಬ್ಬ ಹೇಳ್ದರ ಅರ್ಥ ಮಾಡಿಕಂಬಕೆ ಅವರೊಳಗೆ ಒಂದ್ ಭಾಷೆ ಬೇಕು. ಅದೇ ಮಾತೃಭಾಷೆ!! ನಂಗೆ ಅದ್ ಅರೆಭಾಷೆ!! ವಿಷಯಕ್ಕೆ ಬಾಕನ ನಾವ್ಗೆ ಪಿಯುಸಿಲಿ ಕನ್ನಡ ಪಾಠ ಮಾಡ್ತಿದ್ದ ಬಾಲಣ್ಣ ಮಾಷ್ಟ್ರ ನೆನ್ಪಾದೆ. (ನಂಗೆ ಅವು ಬರೇ ಗುರುಗಳಲ್ಲ. ನಾ ಚಡ್ಡಿ ಹಾಕೊಕೂಂತ ಗೊತ್ತಾಕನನೇ ಅವರ ಮಕ್ಕಳೊಟ್ಟಿಗೆ ನಂಗೂ ಗಂಜಿ ಕೊಡ್ತಿದ್ದ ಪಿತೃಸ್ವರೂಪ ಪೂಜ್ಯರ್.) ಅವು ಹೇಳ್ದಿದ್ದೊ "ಕನ್ನಡ ಮೀಡಿಯಂಲಿ ಕಲ್ತವು ಕನ್ನಡ ಲಾಯ್ಕ್ಲಿ ಕಲ್ತ್ ಅದರ ಮೂಲಕ ಇಂಗ್ಲೀಷ್ ಅರ್ಥ ಮಾಡಿಕಂಡವೆ. ಆದರೆ ಇಂಗ್ಲೀಷ್ ಮೀಡಿಯಂಲಿ ಕಲ್ತವ್ಕೆ ಅತ್ತ ಪೂರ್ತಿ ಇಂಗ್ಲೀಷೂ ಅಲ್ಲ. ಇತ್ತ ಸರಿಯಾಗಿ ಕನ್ನಡನೂ ಬಾದ್ಲೆ. ಒಟ್ಟಾರೆ ಅವರೊಂದುಭಾಷೆಇಲ್ಲದವರು’!!!!"

             ಹಂಗೇ ... ನಾನೂ ಒಬ್ಬ ಭಾಷೆಇಲ್ಲದವಾಂತ ನಂಗೆ ಅರ್ಥ ಆದ್ ಜರ್ಮನಿಗೆ ಬಂದ್ ಎತ್ತಿದ ಮೇಲೆನೇ. ಬೆಂಗ್ಳೂರ್ ಲಿ ಇರ್ಕಾಕನ ಆದರೆ ಎಲ್ಲರೊಟ್ಟಿಗೆ ಕನ್ನಡ ತಪ್ಪಿರೆ ಇಂಗ್ಲೀಷ್. (ಬೆಂಗ್ಳೂರ್ ಲಿ ಬೊದ್ಕಿಕೆ ಕನ್ನಡ ಬೇಕೂಂತಲೇ ಇಲ್ಲೆ. ಬರೇ ಇಂಗ್ಲೀಷ್ ಗೊತ್ತಿದ್ದರೆ ಸಾಕ್. ಬೀಡ ಮಾರಂವನೂ ಇಂಗ್ಲೀಷ್ ಲಿ ಮಾತಾಡ್ದೆ. ಇನ್ನೆಲ್ಲಿಂದ ಕನ್ನಡ ಒಳಿದು!!!) ನಾವ್ಗೆಲ್ಲ ಒಂದ್ ವಿಷಯ ತಲೆಗೆ ಬಂದ್ ಹೊಗ್ಗಿಟು. ಇಂಗ್ಲೀಷ್ ಒಂದ್ ಭಾಷೆ ಬಂದರೆ ಸಾಕ್, ಎಲ್ಲಿ ಬೇಕರೂ ಬೊದ್ಕಿ ಬರಕ್ಂತ.. ಎಲ್ಲಾ ಬರೇ ಲೊಟ್ಟೆ ಮಾರ್ರೆ!! ಸುರೂನ ಸಮಸ್ಯೆ ಸುರು ಆದ್ ನಂಗೆ ಯೋಗ ಕಲ್ಸ್ ಕಾಕನ. ಶ್ವಾಸ ತಕಂಡ್ ಬುಡಿಕೆ ಕಲ್ಸಿಕೆ ಸುರುಮಾಡ್ದೆ. ಹೆಂಗೆ? ಮೂಂಕುನ ತೋರ್ಸಿ ಶ್ವಾಸ ದೀರ್ಘ ಒಳಗೆ ತಕಂಡ್ ಹಂಗೇ ಬುಟ್ಟೆ. ಎಲ್ಲವೂ ಹಂಗೇ ಮಾಡ್ದೊ. ನಂಗೆ ಒಮ್ಮೆಗೇ ಖುಸೀನೂ ಆತ್. ಇವ್ವೆಲ್ಲಾ ಲಾಯ್ಕ್ಲಿ ಕಲ್ತೋಂತ. ನಾ ಕಾಲೆತ್ತಿರೆ ಅವೂ ಕಾಲೆತ್ತುದು. ಕೈ ಎತ್ತಿರೆ ಅವೂ ಕೈ ಎತ್ತುದು!! ಆದರೆ ಅವ್ವು ನಾ ಮಾಡ್ದರ ನೋಡಿ ಹಂಗೇ ಮಾಡ್ತೊಳೋಂತ ಅರ್ಥ ಆದ್ ಯಾಗ ಗೊತ್ತುಟಾ... ಸೊರ್ತ ನಿಲ್ಲ್ ಕಾಕನ ಆಚೆ ಈಚೆ ಜಾರ್ದ ನನ್ನ ಬಟ್ಟೆ ಸರಿ ಮಾಡಿಕಂಡರೆ ಅವ್ವುನೂ ಬಟ್ಟೆ ಸರಿ ಮಾಡಿಕಂಡವೆ!! ಎಂಥಾ ಅವಸ್ಥೆ ಮಾರ್ರೆ ನಂದ್!! ಆಗ ನಂಗೆ ನೆಂಪಾದ್ ನನ್ನ ಜರ್ಮನ್ ಗುರು ಶ್ರೀಮತಿ ಸಚಿತ್ರ ಅರುಣ್!! (ಒಂದಕ್ಷರವಂ ಕಲಿಸಿದಾತಂ ಗುರು ಅಂತ ಹೇಳುವೆ). ಹಂಗೆ ಅವಳ ಮೂಲಕ ಕಲ್ತ್ ಈಗ ಕೈ ಎತ್ತಿಕೆ ನಾನೂ ಕೈ ಎತ್ತಿ ತೋರ್ಸೊಕುತಿಲ್ಲೆ. ಬಾಯಿಲಿ ಹೇಳ್ರೆ ಕೈ ಎತ್ತುವೆ!!!

               ಊಟದ ಸಮಯಲಿ ಲಾಯಿಕ್ ಲಾಯಿಕ್ ಹಣ್ಣ್ ತಿಂಬಕೆ ಸಿಕ್ಕಿದೆ. ಮತ್ತೆ ತಿನಕ್ ಅಂತ ಕಟ್ಟಿಕಂಡ್ ಹೋಕೆ ನಮ್ಮದೇ ಸ್ಟೈಲ್   "ಪ್ಲಾಸ್ಟಿಕ್ ತೊಟ್ಟೆ" ನೆನ್ಪಾತ್. ಆದರೆ ಹೆಂಗೇಂತ ಕೇಳ್ದು?? ಬಲ್ದ ಕೈ ತೋರು ಬೆರ್ಳ್ ಲಿ ಚೌಕದ ಹಾಂಗೆ ಮಾಡಿ ಇಡೀ ಕೈ ಒಳಗೆ ಹುಗ್ಗುಸಿದಂಗೆ ಆಕ್ಷನ್ ಮಾಡಿ "ಕವರ್..ಕವರ್" ಅಂತ ಹೇಳ್ದೆ. ಅಲ್ಲಿದ್ದಂವ ಪಳಪಳ ಹೊಳಿವ ತೊಟ್ಟೆ ಒಂದ್ ತೆಗ್ದು ಕೊಟ್ಟತ್. ಆಗ ನೆನ್ಸಿದೆ ಎಲ್ಲಾ ಭಾಷೆಗಿಂತ ಕೈಭಾಷೆನೇ ಮೇಲ್ ಅಂತ!! ಇನ್ನೊಂದಿನ ಕುಡಿವ ನೀರ್ ತಕಂಣೊನೋತ ಒಂದ್ ಸಣ್ಣ "ಕೆಫೆಟೀರಿಯಾ" ಕ್ಕೆ ಹೋದೆ.(ಇಲ್ಲಿ ನೀರ್ ಬಾಟ್ಲಿಲೇ ಸಿಕ್ಕುದು. ಅದರ ರೇಟ್ ನೋಡ್ರೆ; ನೀರ್ ಗಿಂತ ಬಿಯರ್ ರೇಟ್ ಕಮ್ಮಿ!!) ನಮ್ಮ ಶುದ್ಧ ಭಾರತೀಯ ಸ್ಟೈಲ್ ಲಿ ಹೆಬ್ಬೆರ್ಳ್ ಎತ್ತಿ, ಒಳ್ದ ಬೆರ್ಳ್ ಗಳ ಮೊಡ್ಚಿ, ಮೊಣಕೈ ಬೊಗ್ಗ್ ಸಿ 'ಕುಡಿಯಕೆ ಬೇಕೂಂತ' ಕೇಳ್ದೆ. ಸೇಲ್ಸ್ ಆಂಟಿ ಒಂದ್ ದೊಡ್ಡ ಬಾಟ್ಲಿ ಬಿಯರ್ ಎದ್ರ್ ತಂದ್ ಇಸಿತ್!! ಖುಶಿ ಪಡೊಕೋ ಬೇಜಾರ್ ಮಾಡಿಕಣೋಕೋಂತ ನೀವೇ ಹೇಳಿ!! ಇದ್ ಕಥೆ ಆಕಿಲೆತ ಅಲ್ಲಿ ಫ್ರಿಡ್ಜ್ ಲಿ ಇದ್ದ ನೀರ್ ಕುಪ್ಪಿನ ತೋರ್ಸಿದೆ. ಅಂತೂ ಕುಡಿಯಕೆ ನೀರ್ ಸಿಕ್ಕಿತ್. ಎಲ್ಲಾ ಭಾಷೆಗಿಂತ "ಕೈ ಭಾಷೆ" ಮೇಲ್ ಹೌದು. ಆದರೆ ಅದ್ ಎಲ್ಲಾ ಕಡೆ ಅಲ್ಲಾಂತ ಅರ್ಥ ಆತ್ ಬುಡಿ. ಮಾಮೂಲಿನ ಬ್ರೆಡ್, ಬಟರ್ ತಿಂದ್ ತಿಂದ್ ಬೋರ್!! ಕೋಳಿಗೈಪಾರ್ ಮಾಡಿಕಣಕ್ಂತ  ಮಾಸ ತಾಕೆ ಸೂಪರ್ ಮಾರ್ಕೆಟ್ ಗೆ ಹೋದೆ.ನೋಡ್ರೆ ಬಗೆಬಗೆ, ಬಣ್ಣ ಬಣ್ಣ, ಚಿತ್ರ ವಿಚಿತ್ರ ಸೈಜ್ ಮಾಸದ ತುಂಡುಗ. ಯಾವ ಯಾವ ಜಾತಿನ ಮಾಸ ಉಟ್ಟೋ.. ಅವ್ಕೇ ಗೊತ್ತು!! ಅಲ್ಲೂ ನೋಡ್ರೆ ಸೇಲ್ಸ್ ಆಂಟಿ ಯಾವುದು ಬೇಕೂಂತ ಜರ್ಮನ್ ಭಾಷೆಲಿ ಕೆಳ್ತ್.(ಅದ್ ಹೆಂಗೆ ಕೇಳ್ತ್ಂತ ಗೊತ್ಲೆ. ಆದರೆ ಕೇಳ್ದ್ ಅದೇ ವಿಷಯ  ಅದೇಂತ  ಗೊತ್ತಾತ್. ಅದ್ಕೆ ಭಾಷೆ ಬೇಡ ನೋಡಿ. ಕಾಮನ್ ಸೆನ್ಸ್ ಸಾಕ್!!) ನಾ ಮಾಸದ ಪೀಸ್ ಗಳ ಕಡೆ ಕೈ ತೋರ್ಸಿ "ಕೊಕ್ಕೊಕ್ಕೋ" ಹೇಳ್ದೆ. ದೇವಾ... ಆಂಟಿ ನೆಗಾಡಿಕಂಡ್ "ಓಹ್ ಚಿಕನ್" ಅಂತ ಒಂದರ ಕಟ್ಟಿ ಕೊಟ್ಟತ್. ನಾ ಇನ್ನೊಮ್ಮೆ ಭಾಷೆಇಲ್ಲದವಾಂದೆ!!!

  • ಡಾ. ಪುನೀತ್ ರಾಘವೇಂದ್ರ


No comments:

Post a Comment